ಭಾರತದ ಮುಸ್ಲಿಮ್‍ನ ರಾಜವಂಶಗಳಲ್ಲಿ ಒಂದು. ಬಹಲೂಲ್‍ಲೋದಿ (1451-89) ಈ ವಂಶದ ರಾಜ್ಯ ಸ್ಥಾಪಿಸಿದ ಮೊದಲ ದೊರೆ. ಈತ ‘ಷಾಹೂ ಖೇಲ್’ ಸಮುದಾಯಕ್ಕೆ ಸಂಬಂಧಿಸಿದ ಆಪ್ಘನ್ ಬುಡಕಟ್ಟಿಗೆ ಸೇರಿದವ. ಈ ಜನತೆಯ ಮೂಲಚೂಲಗಳು ಇನ್ನೂ ಕತ್ತಲೆಯಲ್ಲೇ ಇವೆ. ಕೆಲವರು ಇವರ ಮೂಲವನ್ನು ಯೆಹೂದಿ ದೊರೆ ತಾಲೂತ್ (ಸೌಲ್) ಜೊತೆ ಕಲ್ಪಿಸುತ್ತಾರೆ. ಇದಕ್ಕೆ ಐತಿಹಾಸಿಕ ಸಾಕ್ಷಿಗಳು ಸಾಲವು. ತುರ್ಕೀ ಮೂಲಕ್ಕೆ ಸಂಬಂಧಿಸಿದ ಖಲ್ಜಿಗಳು ಆಫ್ಘನ್ ಭೂಭಾಗಕ್ಕೆ ಎಂದರೆ ಘಜನಿನ್, ಬಲ್ಬ, ತುಖರಿಸ್ಥಾನ, ಬಸ್ತ ಮತ್ತು ಘಜಗ್ನೀನ್ ಸ್ಥಳಗಳಿಗೆ ವಲಸೆ ಬಂದು ಕಾಲಾನುಕಾಲದಲ್ಲಿ ಘಿ (ಖಿ)ಲ್ಜೈರು ಎಂದು ಕರೆಸಿಕೊಂಡರು. ಇವರನ್ನೇ ಲೋದಿ ಸಹಿತವಾಗಿ ಅನೇಕ ಆಫ್ಘನ್ ಬುಡಕಟ್ಟುಗಳಿಗೆ ಮೂಲಪುರುಷರೆಂದು ನಂಬಲಾಗುತ್ತದೆ. ಭಾರತದಲ್ಲಿ ಸು. 970ರಲ್ಲಿ ಲಮ್‍ಘಾನ್ ಹಾಗೂ ಮುಲ್ತಾನ್ ಸುತ್ತಮುತ್ತ ಲೋದಿಗಳು ತಮ್ಮ ವಸಹಾತುಗಳನ್ನು ಹೊಂದಿದ್ದರೆಂದು ತಿಳಿದುಬರುತ್ತದೆ. ತುರ್ಕೀ ರಾಜರ ಆಳಿಕೆಯಲ್ಲಿ ಬಲ್ಬನ್ ದೊರೆಯ ಹತ್ತಿರ ಕೆಲವು ಜನ ಲೋದಿಗಳು ಕೆಲಸಕ್ಕೆ ಇದ್ದರೆಂದು ತಿಳಿದುಬರುತ್ತದೆ. ಅನಂತರ 1341ರಲ್ಲಿ ಮಲಿಕ್ ಷಾಹೂ ಲೋದಿರಾಜ ವಂಶದ ಮೂಲಪುರುಷ ಮುಲ್ತಾನದಲ್ಲಿ ದಾಳಿ ನಡೆಸಿ ಅದರ ರಾಜ್ಯಪಾಲನನ್ನು ಸೋಲಿಸಿ ರಾಜ್ಯ ಸ್ಥಾಪಿಸಬೇಕೆನ್ನು ವಷ್ಟರಲ್ಲಿ ಮೊಹಮ್ಮದ್ ತುಘಲಕ್ ತುರ್ತುಕಾರ್ಯಾಚರಣೆಗಿಳಿದು ಅವನ ಆಶೆಗಳಿಗೆ ತಣ್ಣೀರು ಎರಚಿದ. ಷಾಹೂರು ವಂಶಸ್ಥರು ವ್ಯಾಪಾರ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮಲ್ಲಿಕ್ ಷಾಹೂರು ಮೊಮ್ಮಗನೊಬ್ಬ, ಮುಲ್ತಾನನಲ್ಲಿ ವಾಸಿಸುತ್ತಿದ್ದವನು, ಫಿರೋಜ್ ಶಾಹನ ಆಳಿಕೆಯಲ್ಲಿ ಅಲ್ಲಿನ ರಾಜ್ಯಪಾಲ ನಾದ ಮಲಿಕ್ ಮರ್ದಾನ್ ದೌಲತ್ ಎಂಬವನಲ್ಲಿ ಸೇವೆಗೆ ಸೇರಿದ. ಇವನ ಹೆಸರು ಬಹರಾಮ್ ಎಂದು ತಿಳಿದುಬರುತ್ತದೆ. ಈತನ ಹಿರಿಯ ಮಗ ಮಲಿಕ್ ಸುಲ್ತಾನ್ ಶಹಾ ಲೋದ್ರಿಯು ಖಿಜರ್‍ಖಾನನ ಸೇವೆಯಲ್ಲಿ ಕೆಲಸಕ್ಕೆ ಸೇರಿ ಅವನ ಕಡುದುಷ್ಟ ವೈರಿ ಮಲ್ಲು ಇಕ್ಬಾಲ್‍ಖಾನ್ ಎಂಬವನನ್ನು ಯುದ್ಧದಲ್ಲಿ ಕೊಂದು ಅವನ ಪ್ರೀತಿವಿಶ್ವಾಸಗಳನ್ನು ಗಳಿಸಿಕೊಂಡ. ಆತ ಅವನಿಗೆ ‘ಇಸ್ಲಾಮ್ ಖಾನ್’ ಎಂಬ ಬಿರುದು ದಯಪಾಲಿಸಿ ಅನಂತರ ಸ್ವಲ್ಪ ಸಮಯದಲ್ಲೇ ‘ಸರ್‍ಹಿಂದ್’ ಪ್ರಾಂತದ ರಾಜ್ಯಪಾಲನನ್ನಾಗಿ ನೇಮಿಸಿದ. ಆ ಪದವಿ ಮುಂದಿನ ರಾಜ್ಯಭಾರಕ್ಕೆ ನಾಂದಿಯಾಯಿತು. ಮುಬಾರಕ್‍ಶಹಾನ ಆಳಿಕೆಯ ಕಾಲದಲ್ಲಿ ಇಸ್ಲಾಮ್ ಖಾನ್ ಶೂರ ಕಾರ್ಯಗಳನ್ನು ಎಸಗಿ ಖೋಕರರನ್ನೂ ಮೊಘಲರನ್ನೂ ಯುದ್ಧಗಳಲ್ಲಿ ಸೋಲಿಸಿದ ಅನಂತರ ಮೊಹಮ್ಮದ್‍ಶಹಾನ ಕಾಲದಲ್ಲಿ ಮರಣವನ್ನಪ್ಪಿದ. ಇಸ್ಲಾಮ್‍ಖಾನ್ ಸಾಯುವ ಮುನ್ನ ತನ್ನ ಸೋದರನ ಮಗನೂ ಅಳಿಯನೂ ಆದ ಬಹ್‍ಲೂಲ್ ತನ್ನ ಸ್ಥಾನಕ್ಕೆ ಬರಬೇಕೆಂದು ಸೂಚಿಸಿ ಸರ್‍ಹಿಂದ್‍ಪ್ರಾಂತಕ್ಕೆ ಅವನನ್ನು ಅಧಿಕಾರಿಯನ್ನಾಗಿ ಮಾಡಿದ.

ಬಹ್‍ಲೂಲ ಯುವಕನಾಗಿದ್ದು ಕುದುರೆ ವ್ಯಾಪಾರ ಮಾಡುತ್ತಿದ್ದ. ಮೊಹಮ್ಮದ್‍ಶಹಾನಿಗೆ ಉತ್ತಮ ಕುದುರೆಗಳನ್ನು ಮಾರುವ ಒಂದು ಸಂದರ್ಭದಲ್ಲಿ ಅವನ ಜೀವನದ ದಾರಿಯಲ್ಲಿ ಒಂದು ಹೊಸ ತಿರುವು ಬಂದಿತು. ಕುದುರೆಗಳ ಬೆಲೆಯನ್ನು ಬಂಡಾಯಖೋರ ಪ್ರಾಂತವೊಂದರ ಕಂದಾಯ ಇತ್ಯಾದಿ ಆದಾಯಗಳನ್ನು ವಸೂಲ್‍ಮಾಡಿ ತೀರಿಸಿಕೊಳ್ಳ ಬೇಕೆಂದು ಬಹ್‍ಲೂಲನಿಗೆ ತಿಳಿಸಲಾಯಿತು. ರಾಜನ ಆಜ್ಞೆ ಪಡೆದ ಬಹ್‍ಲೂಲ್ ಆ ಪ್ರಾಂತದ ಮೇಲೆ ದಾಳಿಮಾಡಿ ಅಲ್ಲಿನ ಜನರ ಆಸ್ತಿಪಾಸ್ತಿಸಂಪತ್ತೆಲ್ಲವನ್ನೂ ಕೊಳ್ಳೆಹೊಡೆದ. ಇದನ್ನು ಕಂಡು ಸಂತೋಷಪಟ್ಟ ಮೊಹಮ್ಮದ್‍ಶಾಹ ಬಹ್‍ಲೂಲನಿಗೆ ಆಪ್ರಾಂತದ (ಫರಗಣೆಯ) ಅಮೀರ್ ಪದವಿ ಇತ್ತ. ಇಸ್ಲಾಂಖಾನ್ ಮರಣ ಹೊಂದಿದ ಕೂಡಲೆ ಬಹ್‍ಲೂಲ ಸರ್‍ಹಿಂದ್ ವಿಭಾಗದಲ್ಲಿ ತನ್ನ ಅಸ್ತಿತ್ತ್ವವನ್ನು ಸ್ಥಿರಗೊಳಿಸಿ ಶೀಘ್ರವಾಗಿ ತನ್ನ ಪ್ರಭಾವವನ್ನು ಅಂದಿನ ಅಲ್ಲಿಯ ರಾಜಕೀಯದಲ್ಲಿ ನೆಲೆಗೊಳಿಸಿದ. ಪಂಜಾಬ್ ಪ್ರಾಂತದ ಮೇಲೆ ಕೂಡ ಅದರ ಮುಖ್ಯ ಭಾಗದಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸಿದ. ನಿಶ್ಶಕ್ತನಾದ ಮೊಹಮ್ಮದ್‍ಶಹಾನು ಬಹ್‍ಲೂಲನನ್ನು ನಿಯಂತ್ರಿಸಲಾಗದೆ ಯುದ್ಧದಲ್ಲಿ ಗೆದ್ದ ಆ ಭಾಗವನ್ನು ಅವನಿಗೇ ಒಪ್ಪಿಸಿದ.
ದಿಲ್ಲಿ ಸುಲ್ತಾನೀರಾಜ್ಯ ಖಲ್ಜಿ, ತುಗಲಕ್, ಸಯ್ಯೀದ್ ಹಾಗೂ ಲೋದಿ ಎಂಬ ನಾಲ್ಕು ಮನೆತನಗಳ ಆಳಿಕೆಯ ಹೆಸರಿನಿಂದ ಗುರುತಿ ಸಲ್ಪಟ್ಟರೂ ಈ ರಾಜಮನೆತನಗಳು ತುರ್ಕೀಮೂಲದ ಮನೆತನಗಳಾದುದ ರಿಂದ, ತುರ್ಕೀರಾಜ್ಯ ಎಂದೂ ಗುರುತಿಸಲಾಗುತ್ತದೆ. ಈ ಮನೆತನಗಳಲ್ಲಿ ಮದುವೆನೆಂಟಸ್ತಿಕೆ-ಶರೀರಸಂಬಂಧಗಳ ಮೂಲಕ-ಒಂದರ ಚರಿತ್ರೆಯೊಂದಿಗೆ ಇನ್ನೊಂದರ ಹಾಗೆಯೆ ಮಗುದೊಂದರ ಚರಿತ್ರೆ ಮತ್ತೆ ನೌಕರಿ ಸೇವಾ ಸಂಬಂಧಗಳು ಕೂಡಿಕೊಂಡು ಒಂದು ರೀತಿಯಲ್ಲಿ ನಾಲ್ಕೂ ರಾಜಮನೆತನ ಗಳ ಚರಿತ್ರೆಗಳು ಒಂದರಲ್ಲೊಂದು ಹಾಸುಹೊಕ್ಕಿವೆ-ಒಳಗೊಳಗೇ ಹೆಣೆದುಕೊಂಡಿವೆ. ಅಧಿಕಾರಕ್ಕಾಗಿ, ದಾಯಾದಿಗಳ ಮತ್ಸರಕ್ಕಾಗಿ, ಧರ್ಮದ ಬೆಳೆವಣಿಗೆಗಾಗಿ ಮತ್ತೆ ಸಂಪತ್ತಿನ ಲೂಟಿಗಾಗಿ ಆಗಾಗ ಯುದ್ಧ-ತುಮುಲ-ದ್ವಂದ್ವಗಳು ನಡೆದವು.

ಇಬ್ರಾಹಿಮ್‍ಲೋದಿಯ ಕಾಲಕ್ಕೆ ಮೊಗಲ್‍ವಂಶದ ಬಾಬರ್ ಕ್ರಿ.ಶ. 1526ರಲ್ಲಿ ದಂಡೆತ್ತಿಬಂದು ದಿಲ್ಲಿ ಆಕ್ರಮಿಸಿದ. ಲೋದಿ ವಂಶದ ಮೂವರು ರಾಜರ ಆಳ್ವಿಕೆಯ ವಿವರಗಳು.

ಚಿತ್ರ-ಲೋದಿವಂಶದ-ವಂಶಾವಳಿ

ಬಹ್‍ಲೂಲ್ ಲೋದಿ (1451-89): ಈತ ಫರಗಣ ಭೂ ಪ್ರದೇಶವನ್ನು ‘ಸರ್‍ಹಿಂದ್’ ಪ್ರಾಂತದೊಂದಿಗೆ ಮಂಡಲಾಧಿಪತಿಯಾಗಿ ಆಳಲು ಉಪಕ್ರಮಿಸಿ ಪಂಜಾಬ್ ಪ್ರಾಂತವೆಲ್ಲಕ್ಕೂ ಅಧಿಪತಿಯಾದ. ಮಾಲವದ ದಾಳಿಯನ್ನು ಎದುರಿಸುವಲ್ಲಿ ಮೊಹಮ್ಮದ್‍ಷಾನಿಗೆ ಅವನ ಕೋರಿಕೆಯಂತೆ ಸಹಾಯ ಮಾಡಿದ. ಅನಂತರದಲ್ಲಿ ದಿಲ್ಲಿ ಗೆದ್ದುಕೊಳ್ಳಲು ಬಹ್‍ಲೂಲ್ ಎರಡು ಸಲ ಪ್ರಯತ್ನಿಸಿದ, ಆದರೆ ಅವನ ಎರಡೂ ಪ್ರಯತ್ನಗಳು ವಿಫಲವಾದವು. ಮೂರನೆಯ ಬಾರಿ  ತೊಂದರೆ ಇಲ್ಲದೆ ಆಕ್ರಮಿಸಿಕೊಂಡ. ಸಯ್ಯೀದ್ ವಂಶದ ದೊರೆ ಆಲಂ ನಿಶ್ಶಕನೂ  ಮನೋರಂಜನೆಯಲ್ಲಿ ಕಾಲಕಳೆಯುವವನೂ ಆಗಿದ್ದುದರಿಂದ ಅವನ ಮಂತ್ರಿ ಹಮೀದ್‍ಖಾನ್ ಒಡ್ಡಿದ ಸಂಚಿನಲ್ಲಿ ಯಶಸ್ವಿ ಆದುದು ಇದಕ್ಕೆ ಕಾರಣ. ಆ ಸಂದರ್ಭದಲ್ಲಿ ದಿಲ್ಲಿ ಮೇಲೆ ದಂಡೆತ್ತಿ ಬಂದ ಇನ್ನೊಬ್ಬ ಅಮೀರ್ ನಾಗೌರ್‍ಮಂಡಲಕ್ಕೊಡೆಯನಾದ ಖಯ್ಯಾಖಾನ್ ದಿಲ್ಲಿ ಬಹ್‍ಲೂಲನ ವಶವಾದದ್ದನ್ನು ತಿಳಿದು ಆಶಾಭಂಗನಾಗಿ ಹೋದ. ಬಹ್‍ಲೂಲ ಹಮೀದ್‍ಖಾನನ್ನು  ವಜೀರ್‍ಸ್ಥಾನದಿಂದ ದೂರಮಾಡಿದ. ದ್ರೋಹವೆಸಗಿದವನ ಜೀವನ ದ್ರೋಹದಲ್ಲೇ ಕೊನೆಗೊಂಡಿತು. 1451 ಏಪ್ರಿಲ್ 19ರಂದು ಬಹ್‍ಲೂಲ್‍ಷಾ ಗಾಜೀ ಎಂಬ ಹೆಸರಿನಿಂದ ಸಿಂಹಾಸನವನ್ನು ಏರಿದ.

ದಿಲ್ಲಿಯನ್ನು ಆಕ್ರಮಿಸಿಕೊಳ್ಳುವುದರಿಂದ ಬಹ್‍ಲೂಲನ ರಾಜ್ಯದ ಗಡಿಗೆರೆಗಳು ಅಷ್ಟೇನು ವಿಸ್ತರಿಸಿಕೊಳ್ಳದಿದ್ದರೂ ಆಡಳಿತಾತ್ಮಕ ಜವಾಬ್ದಾರಿಗಳು ಹೆಚ್ಚಿದವು. ಅದೂ ವಿವಿಧ ದೆಸೆಗಳಲ್ಲಿ ಸಾಮ್ರಾಜ್ಯದ ಶಾಸನವನ್ನು ಒಪ್ಪದೆ ಸೆಟೆದುನಿಂತ ದಿಲ್ಲಿಯ ಸುತ್ತುಮುತ್ತಲಿನ ಸಾಮಂತ ಮನೆತನಗಳನ್ನು ಮೊದಲು ಸದೆಬಡಿದು ಅಧೀನಕ್ಕೆ ತರಬೇಕಾಗಿತ್ತು. ಸಯ್ಯೀದ್ ಮನೆತನದ ಅಧೀನದಲ್ಲಿದ್ದ ಜೌನಪುರ ಮಂಡಲವನ್ನು ತನ್ನ ರಾಜ್ಯದಲ್ಲಿ ಸೇರಿಸಿಕೊಳ್ಳುವವರೆಗೆ ದಿಲ್ಲಿ ಸಿಂಹಾಸನ ಭದ್ರವಾಗುತ್ತಿರ ಲಿಲ್ಲ; ಅದಕ್ಕಾಗಿ ಜೌನ್‍ಪುರದೊಂದಿಗೆ ಯುದ್ಧವನ್ನೇ ಹಮ್ಮಿಕೊಳ್ಳ ಬೇಕಾಗಿತ್ತು. ಆಫ್ಘನ್ ಶ್ರೀಮಂತ ಸೇವಕರನ್ನು ಆಡಳಿತದಲ್ಲಿ ಹೊಸರೀತಿ ಯಲ್ಲಿ ಹೊಂದಿಸಿಕೊಂಡು ಹೊಸರೂಪವನ್ನು ಕೊಟ್ಟು ಸುಭದ್ರಗೊಳಿಸ ಬೇಕಾಗಿತ್ತು.

ಬಹ್‍ಲೂಲನ ಆಳಿಕೆಯ ಕಾಲದ ಅತಿ ಮಹತ್ತ್ವದ ತೋರುಗೆಲಸ ಅಸಾಧಾರಣ ಸಾಧನೆಯೆಂದರೆ ಜೌನ್‍ಪುರ ರಾಜ್ಯವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡುದುದು. ಅದು ಅವನ ವಂಶದ ರಾಜ್ಯ ಬುನಾದಿಯನ್ನು ಭದ್ರಪಡಿಸಿತು. ಜೌನ್‍ಪುರದ ಷರ್ಕಿಗಳು ದಿಲ್ಲಿ ರಾಜ್ಯಕ್ಕೆ, ಸಯ್ಯೀದ್ ಸಿಂಹಾಸನಕ್ಕೆ ತಾವೇ ಅಧಿಕಾರಿಗಳೆಂದು ಭಾವಿಸಿದ್ದರು, ಅವರನ್ನು ಸೋಲಿಸುವುದು ಬಹಳ ಮುಖ್ಯವಾಗಿತ್ತು. ಸಯ್ಯೀದ್ ಮನೆತನದೊಂದಿಗೆ ಅವರಿಗಿದ್ದ ನೆಂಟಸ್ತನವೇ ಆ ಬಗೆಯ ಭಾವನೆಗೆ ಕಾರಣವಾಗಿತ್ತು. ಆ ಷರ್ಕಿಗಳಿಗೆ ತಾವೇ ದಿಲ್ಲಿ ಸಿಂಹಾಸನಕ್ಕೆ ಅಧಿಕಾರಿಗಳು ಎಂಬ ಭಾವನೆ ಬೇರೂರಿತ್ತು. ಅಂತೆಯೇ ಆ ಮನೆತನದ ಮಹಮೂದನಿಗೆ ಬಹ್‍ಲೂಲ್ ಭದ್ರವಾಗಿ ತಳವೂರುವುದಕ್ಕಿಂತ ಮುಂಚೆ ಅವನನ್ನು ಸದೆಬಡಿಯಬೇಕೆಂಬ ಆಸೆ. ಅಂತೆಯೇ ಅವನು ಬಹ್‍ಲೂಲನ ಆಳಿಕೆಯ ಮೊದಲ ವರ್ಷದಲ್ಲೇ ದಿಲ್ಲಿ ಕೋಟೆಯನ್ನು ಮುತ್ತಿದ. ಅದನ್ನು ಅವನು ಗೆಲ್ಲಬಹುದಾಗಿತ್ತು. ಆದರೆ ಅವನ ಸೇನಾನಾಯಕ ದರ್ಯಾಖಾನ್ ಲೋದಿ ಪಕ್ಷಾಂತರ ಮಾಡಿದ. ಮಹಮೂದ್ ನಿರಾಶನಾಗಿ ಜೌನ್‍ಪುರಕ್ಕೆ ಹಿಂತಿರುಗಿದ. ಆದರೆ ದಾರಿಯಲ್ಲೇ ಮುಲ್ತಾನಕ್ಕೆ ಹೋಗುತ್ತಿದ್ದ ಬಹ್‍ಲೂಲ್ ಹಿಂತಿರುಗಿ ಬಂದು ಅವನನ್ನು ಎದುರಿಸಿದ. ದಿಲ್ಲಿಯಿಂದ 27 ಕಿಮೀ. ಅಂತರದಲ್ಲಿದ್ದ ನರೇಲಾ ಸ್ಥಳದಲ್ಲಿ ಇಬ್ಬರಿಗೂ ಯುದ್ಧವಾಯಿತು, ಆ ಯುದ್ಧದಲ್ಲಿ ಮಹಮೂದ್ ಸೋತರೂ ಏತಾವ್ ಹಾಗೂ ಷಮ್‍ಸಾಬಾದ್ ಎಂಬ ಎರಡು ಸ್ಥಳಗಳಲ್ಲಿ ಪ್ರತೀಕಾರರೂಪದ ಯುದ್ಧಗಳನ್ನು ಮಾಡಿದ. ಯುದ್ಧಕಾರ್ಯಮುಂದುವರಿಸುತ್ತಿದ್ದಾಗಲೇ ಒಮ್ಮಿಂದೊಮ್ಮೆಗೆ 1457ರಲ್ಲಿ ನಿಧನ ಹೊಂದಿದ. ಆತನ ಪುತ್ರ ಮೊಹಮ್ಮದ್‍ಷಾ ಒಪ್ಪಂದವೊಂದನ್ನು ಮಾಡಿಕೊಳ್ಳಲು ಕೈ ಚಾಚಿದರೂ ಬಹ್‍ಲೂಲ್ ಅದಕ್ಕೆ ಒಪ್ಪದೆ ರಾತ್ರಿಚಟುವಟಿಕೆಯ ಕಾರಣಕ್ಕಾಗಿ ತನ್ನ ಭಾವಮೈದುನ ಕುತುಬ್‍ಖಾನನನ್ನು ಸೆರೆಯಲ್ಲಿ ಸಿಕ್ಕಿಹಾಕಿಕೊಂಡ ಬಿಡುವಂತೆ ಒತ್ತಾಯಿಸುತ್ತ ಅವನ ಸೋದರ ಜಲಾಲ್‍ಖಾನನ್ನು ಸೆರೆಹಿಡಿದ. ಇತ್ತ ಜೌನ್‍ಪುರದಲ್ಲಿ ಅವನ ದಾಯಾದಿ ಹುಸೇನ್ ಜ್ಞಾತಿಯುದ್ಧ ಹೂಡಿದ. ಸೋದರರ ಯುದ್ಧದಲ್ಲಿ ಮೊಹಮ್ಮದ್‍ಷಾ ಮಡಿದ. ಷರ್ಕಿಯ ಹುಸೇನ್ ಲೋದಿ ಬಹ್‍ಲೂಲನನ್ನು ಸೋಲಿಸಿ ದಿಲ್ಲಿಯನ್ನು ಆಕ್ರಮಿಸಿಕೊಳ್ಳಬೇಕೆಂದು ಹಲವು ಪ್ರಯತ್ನಗಳನ್ನು ಮಾಡಿದ. ಆದರೆ ಪ್ರತಿಯೊಂದು ಪ್ರಯತ್ನದಲ್ಲೂ ಅವನಿಗೆ ಸೋಲುಂಟಾಗಿ ಬಹ್‍ಲೂಲನ ಕೈಮೇಲಾಯಿತು. ಅವನು ಜೌನ್‍ಪುರ ಸಂಸ್ಥಾನವನ್ನು ಷರ್ಕಿಗಳಿಂದ ಕಿತ್ತುಕೊಂಡ. ಹುಸೇನ್ ಆಶ್ರಯ ಬಯಸಿ ಬಿಹಾರಕ್ಕೆ ಓಡಿಹೋದ. ಮತ್ತೆ ಬಹ್‍ಲೂಲನ ಉತ್ತರಾಧಿಕಾರಿಯ ಕಾಲದಲ್ಲಿ ಅಲ್ಲಿಂದಲೂ ಅವನು ಬಂಗಾಲಕ್ಕೆ ಓಡಿಸಲ್ಪಟ್ಟ. ಬಹ್‍ಲೂಲನ ಆಳಿಕೆಯಲ್ಲಿ ಇದು ಮಹತ್ತ್ವದ ಘಟನೆ. ಆರಂಭದಲ್ಲಿ ಅವನು ಮಾಲವದ ಮಹಮೂದ್ ಖಲ್ಜಿಗೆ ಸಹಾಯಮಾಡುವಂತೆ ಯಾಚಿಸಿದ. ಸಹಾಯ ಮಾಡುತ್ತೇನೆ ಎಂದ ಆತ ಸಹಾಯಮಾಡುವುದಕ್ಕಿಂತ ಮುಂಚೆಯೆ ಸಾವಿಗೆ ತುತ್ತಾದ. ಏಕಾಕಿಯಾದ ಬಹ್‍ಲೂಲನಿಗೆ ಅವನ ಧೈರ್ಯವೇ ಏನೆಲ್ಲ ಗೆಲುವನ್ನು ತಂದಿತ್ತಿತ್ತು.
ದೋಆಬ್ ಭೂಮಿ, ಮೇವಾರ್ ಮುಂತಾದ ದಿಲ್ಲಿಯ ಅಕ್ಕಪಕ್ಕದ ರಾಜ್ಯಗಳಲ್ಲಿ-ಮಂಡಲಗಳಲ್ಲಿ-ಶಾಂತಪಾನ್ನು ನೆಲೆಗೊಳಿಸುವುದು ಬಹುಮುಖ್ಯ ಕೆಲಸವಾಗಿತ್ತು, ಅಲ್ಲಿನ ರಾಜರು ಷಕಿರ್ ರಾಜರೊಂದಿಗೆ ಹೊಂದಿಕೊಳ್ಳುವ ಸಂಭವವಿದ್ದಿತು. ಹಾಗಾದರೆ ಜೌನಪುರ ಷರ್ಕಿಗಳ ಭಂಡಾರ ಸಮೃದ್ಧಿಯನ್ನು ಕಂಡು ಅವರು ಸಾಕಷ್ಟು ಬಲ ಸಂವರ್ಧನೆ ಮಾಡಿಕೊಳ್ಳಬಹುದಾಗಿತ್ತು. ಹೀಗಾಗಲು ಬಿಡಬಾರದೆಂದು ಬಯಸಿ ಮೇವಾರ್, ಸಂಭಲ್, ಕೋಲ್, ಸಾಕೇತ್, ಏತವ, ರಾಪ್ರಿ, ಭೋನ್‍ಗಾಂವ್ ಹಾಗೂ ಗ್ವಾಲಿಯರ್ ಮುಂತಾದ ರಾಜ್ಯಗಳ ಮೇಲೆ ಬಹ್‍ಲೂಲ್ ಅನೇಕ ಸಲ ದಂಡಯಾತ್ರೆಗಳನ್ನು ಕೈಗೊಂಡ; ಈ ಪ್ರದೇಶಗಳ ರಾಜರು ಇವನಿಗೆ ಶರಣಾದರು. ಆದರೂ ಮುಲ್ತಾನವನ್ನು ಆಳುತ್ತಿದ್ದ ಲಂಕರನ್ನು ಸೋಲಿಸಲು-ತನ್ನ ಆಡಳಿತಾಧಿಕಾರದಲ್ಲಿ ತರಲು ಬಹ್‍ಲೂಲನಿಗೆ ಆಗಲಿಲ್ಲ. ಅಂತೆಯೆ ಬಹ್‍ಲೂಲನ ಆಲ್ಹಣಪುರ ಮೇಲಿನ ದಂಡಯಾತ್ರೆ ಯಶಸ್ವಿ ಆಗಲಿಲ್ಲ. ಚಂದೇರಿಯ ಷೇರ್‍ಖಾನ್ ಬೆಂಬತ್ತಿದಾಗ ಶ್ರೀಘ್ರವಾಗಿ ದಿಲ್ಲಿಗೆ ಬಂದು ಸೇರಿಕೊಳ್ಳಬೇಕಾಯಿತು. ಈ ಎಲ್ಲ ಎಡರು ತೊಡರುಗಳ ಮಧ್ಯದಲ್ಲಿ ಈತ ಲೋದಿವಂಶಕ್ಕೆ ಒಂದು ಉತ್ತಮ ಬುನಾದಿ ಹಾಕಿದ; ಗಡಿ ಗೆರೆಗಳನ್ನು ಹಿಗ್ಗಿಸಿದ ಬಹಳ ಕಾಲ ಕಳೆಗುಂದಿದ ದಿಲ್ಲಿ ರಾಜ್ಯಕ್ಕೆ ಹೊಸಕಳೆ ತಂದುಕೊಟ್ಟ. ರಾಜ್ಯ, ಆಡಳಿತ ಮತ್ತು ಭಂಡಾರವನ್ನು ಕೇವಲತಾನೇ ಭೋಗಿಸದೆ ಆತ ತನ್ನ ಬಂಧುಗಳಲ್ಲಿ, ಸೇವೆಯಲ್ಲಿದ್ದ ನಿಷ್ಠಾವಂತ ಶ್ರೀಮಂತರಲ್ಲಿ ಮತ್ತು ಮಕ್ಕಳಲ್ಲಿ ಹಂಚಿದ. ಲೋದಿರಾಜ್ಯ ಸುಖಮಯವಾಗಿ ಮುಂದುವರಿಯಬೇಕೆಂಬ ದೂರದೃಷ್ಟಿ ಯಿಂದ ಎಲ್ಲ ಶ್ರೇಷ್ಠ ಜನರನ್ನೂ ತನ್ನ ಸಮಾನರೆಂದೇ ಭಾವಿಸಿ ಅವರೊಂದಿಗೆ ತನ್ನ ರತ್ನಗಂಬಳಿಯನ್ನೂ ಹಂಚಿಕೊಂಡ. ಹೀಗೆ ರಾಜ್ಯದ ಅಸ್ತಿತ್ವಕ್ಕೆ ಆಪ್ಘನ್ನರ ಒಂದು ಸಂಯೋಜಿತ ಶಕ್ತಿಯನ್ನು ಒದಗಿಸಿ ಸಾಕೇತ್ ಫರಗಣಾದ ಜಲಾಲಿನಗರದ ಬಳಿಯ ಮಲಾವಲೀ ಎಂಬ ಸ್ಥಳದಲ್ಲಿ ಕ್ರಿ.ಶ. 1489ರ ಜುಲೈ ತಿಂಗಳಿನ ಮಧ್ಯದಲ್ಲಿ ಮರಣ ಹೊಂದಿದ.

ಸಿಂಕದರ್‍ಷಾ : 1489-1517. ಬಹ್‍ಲೂಲ್ ಸಾಯುವುದಕ್ಕಿಂತ ಮುಂಚೆ ತನ್ನ ಅನಂತರ ತನ್ನ ಮಗ ನಿಜಾಮ್‍ಖಾನ್ ಉತ್ತರಾಧಿಕಾರಿ ಆಗಬೇಕೆಂದು ಸೂಚಿಸಿದ್ದ. ಆದರೆ ಕೆಲವು ಜನ ಶ್ರೀಮಂತರೂ ಆಡಳಿತಕ್ಕೆ ಸಂಬಂಧಪಟ್ಟವರೂ ಅದಕ್ಕೆ ಪ್ರತಿಯಾಗಿ ಅವನ ಇನ್ನೊಬ್ಬ ಪುತ್ರ ಬಾರ್‍ಬಕ್ ಇಲ್ಲವೇ ಮೊಮ್ಮಗ ಆಜಮ್ ಹುಮಾಯೂನ್ ಪಟ್ಟಕ್ಕೆ ಕೂಡಬೇಕೆಂದು ಬಯಸಿದರು. ಆದರೆ ಅವರ ಈ ಆಸೆ ಈಡೇರಲಿಲ್ಲ. ಬಹ್‍ಲೂಲ್ ಮರಣ ಹೊಂದಿದ ಎರಡು ದಿನಗಳಲ್ಲಿ ನಿಜಾಮ್‍ಖಾನನ ತಾಯಿ ತನ್ನ ಮಗನ ಪಕ್ಷ ವಹಿಸಿ ಅವನೇ ಸಿಂಹಾಸನಕ್ಕೆ ಅಧಿಕಾರಿ ಎಂದು ಮಧ್ಯಸ್ತಿಕೆ ವಹಿಸಿ ವಿರೋಧಿಗಳ ಆಸೆಯು ಅಗ್ನಿಗೆ ತಣ್ಣೀರ್ ಎರಚಿದಳು. ಬಹ್‍ಲೂಲನ ಶವ ದಫನ್ ಮಾಡುವುದಕ್ಕೆ ಜಲಾಲಿಗೆ ಒಯ್ದರು. ನಿಜಾಮ್‍ಖಾನ್ ಅಲ್ಲಿಗೆ ಬಂದು ಅನಂತರ 1489 ಜುಲೈ 15ರಂದು ಸಿಕಂದರ್‍ಷಾ ಎಂಬ ಹೆಸರಿನೊಂದಿಗೆ ಕಿರೀಟ ಧರಿಸಿದ. ತನ್ನ ತಂದೆ ಆರಂಭಿಸಿದ ಕಾರ್ಯವನ್ನು ಮುಂದುವರಿಸಿ ಅವನ ಮಕ್ಕಳಲ್ಲೇ ಯೋಗ್ಯನೆಂದು ಸಾಧಿಸಿ ತೋರಿಸಿದ. ಈ ಸಂದರ್ಭದಲ್ಲಿ ಆಲಮ್‍ಖಾನ್ ಎಂಬ ಸಹೋದರನನ್ನು ಒಲಿಸಿಕೊಂಡ. ಅವನ ಸಾರ್ವಭೌಮತ್ವ ಒಪ್ಪದ ಚಿಕ್ಕಪ್ಪ ಇಷಾಖಾನ್ ಅಣ್ಣನ ಮಗ ಆಜಮ್‍ಹುಮಾಯೂನ್ ಹಾಗೂ ಇನ್ನೊಬ್ಬ ಸೋದರ ಬಾರ್‍ಬಕ್ ಮೊದಲಾದವರನ್ನು ದಂಡಿಸಿದ. ರಕ್ತದ ಕುಡಿ ಎಂದು ಜೌನ್‍ಪುರದಲ್ಲಿದ್ದ ಬಾರ್‍ಬಕ್‍ನನ್ನು ಪುನಃ ಅಲ್ಲಿಗೆ ಪ್ರಾಂತಾಧಿಪತಿಯನ್ನಾಗಿ ನೇಮಿಸಿದ. ಆದರೆ ಜಮೀನ್ದಾರರು ಅವರ ಬೆನ್ನಹಿಂದೆ ಇದ್ದ ಹುಸೇನ್ ಷರ್ಕಿ ‘ಜುಗ’ ಎಂಬ ಬಚಗೋಟಿ ಬುಡಕಟ್ಟಿನಬಣದ ನಾಯಕನೊಂದಿಗೆ ಸೇರಿ ದಂಗೆ ಎದ್ದರು. ಸಿಕಂದರ್ ಈ ದಂಗೆಯನ್ನು ಅಡಗಿಸಿ ಜುಗನನ್ನು ಸೆರೆಹಿಡಿಯಬೇಕೆಂದು ಇಚ್ಛೆಪಟ್ಟ. ಹುಸೇನ್‍ಷರ್ಕಿ ಜುಗನಿಗೆ ಆಶ್ರಯಕೊಟ್ಟವನು ಯುದ್ಧದಲ್ಲಿ ಸೋತು ಓಡಿ ಹೋದ. ಹೊಂದಾಣಿಕೆ ಮಾಡಿಕೊಳ್ಳದಿದ್ದರಿಂದ ಅವನು ಆಜನ್ಮ ಪರ್ಯಂತ ಬಂಗಾಲದಲ್ಲಿ ಅಲ್ಲಾಉದ್ದೀನ್ ಹುಸೇನ್‍ಷಾ ದೊರೆಯ ಪಿಂಚಣಿದಾರನಾಗಿ ಬಾಳು ಸವೆಸಬೇಕಾಯಿತು. ಮತ್ತೆ ಬಂಗಾಲದ ಅಲ್ಲಾಉದ್ದೀನ್‍ಷಾ ಸಂದಿ ಮಾಡಿಕೊಂಡು ಸಿಕಂದರನಿಗೆ ಕಪ್ಪಕಾಣಿಕೆಗಳನ್ನು ಒಪ್ಪಿಸಿದ.
ಸಿಕಂದರ್ ಇತರ ಮುಸ್ಲಿಮ್ ರಾಜರೊಂದಿಗೆ ಒಂದು ಬಗೆಯ ಉದಾರನೀತಿಯನ್ನು ಅನುಸರಿಸಿದ; ಅದಕ್ಕೆ ಕಾರಣವಾದ ತನ್ನ ಇತಿಮಿತಿಗಳನ್ನು ಬಲ್ಲವನಾಗಿದ್ದ. ಯಾವುದೇ ಹೆಜ್ಜೆಯನ್ನು ಅವನು ಹಲವುಸಲ ಯೋಚಿಸಿ ಇಡುತ್ತಿದ್ದ. ಅಂತೆಯೇ ಮಾಲವಪ್ರಾಂತದಲ್ಲಿ ಬಂದ ಅವಕಾಶಗಳನ್ನು ದಿಢೀರ್ ಎಂದು ಸ್ವೀಕರಿಸದೆ ನಿಧಾನವಾಗಿ ನಡೆದು ಅದನ್ನು ಆಕ್ರಮಿಸಿಕೊಂಡ, ಅದಕ್ಕೆ ಅವನನ್ನು ಯಾರೂ ಆಕ್ಷೇಪಿಸಲಿಲ್ಲ. ಚಂದೇರಿ ಕೋಟೆ ನಿರಾತಂಕವಾಗಿ ಅವನ ಕೈವಶವಾಯಿತು. ಆದರೆ ಸಿಕಂದರ್ ಇಷ್ಟು ಉದಾರಿಯಾಗಿ ರಾಜಪೂತರ ಬಗೆಗೆ ವರ್ತಿಸಲಿಲ್ಲ. ಅವರನ್ನು ನಾಶಮಾಡಬೇಕೆಂದು, ಅವರ ಶಕ್ತಿಯನ್ನು ಕಡಿಮೆ ಮಾಡಬೇಕೆಂದು ಇಷ್ಟಪಟ್ಟ. ರಜಪೂತರ ಆಡಳಿತಕ್ಕೊಳಪಟ್ಟ ಗ್ವಾಲಿಯರ್ ಸಂಸ್ಥಾನ ಹಾಗೂ ಉತ್ಗೀರ್ ಮತ್ತು ನರವರ್ ಸಂಸ್ಥಾನಗಳನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ವಾಘೇಲ್ ಸಂಸ್ಥಾನದ ಮೇಲೂ ಹಲವು ದಾಳಿಗಳನ್ನು ಮಾಡಿದ. ಮಾಲವರಾಜ್ಯದ ಆಡಳಿತ ನೋಡಿಕೊಳ್ಳಲು ತನ್ನ ಅಮೀರರನ್ನು ನೇಮಿಸಿದ. ಹಳೆಯ ಹಾಳಾದ ದಿಲ್ಲಿಗಿಂತ ತನ್ನ ರಾಜ್ಯದಲ್ಲಿ ಮಧ್ಯ ಸ್ಥಳವಾಗುವಂತಹ,  ರಾಜಕೀಯ ಚಟುವಟಿಕೆಗಳಿಗಾಗಿ ಅನುಕೂಲವಾಗುವಂತಹ ಸ್ಥಳವನ್ನು ರಾಜಧಾನಿಗಾಗಿ ಆರಿಸಿದನು. ಅಂತೆಯೆ ‘ಸಂಭಲ್’ಗೆ ತನ್ನ ವಾಸಸ್ಥಳವನ್ನು ಕ್ರಿ.ಶ.1499ರಲ್ಲಿ ಬದಲಾಯಿಸಿದ. ರಾಜಪೂತರ ರಾಜ್ಯಗಳ ಮೇಲೆ ದಾಳಿ ನಡೆಸುವುದಕ್ಕೆ ಇದರಿಂದ ಸ್ವಲ್ಪಮಟ್ಟಿಗೆ ಉಪಯುಕ್ತವಾಯಿತು. ಆದರೂ ಅದಕ್ಕೂ ಹೆಚ್ಚು ಉತ್ತಮವೆಂದು 1504ರಲ್ಲಿ ಆಗ್ರಾನಗರವನ್ನು ಸ್ಥಾಪಿಸಿ-ಕಟ್ಟಿಸಿ-ಅಲ್ಲಿಗೆ ತನ್ನ ರಾಜಧಾನಿಯನ್ನು ಸ್ಥಳಾಂತರಿಸಿದ. ಹೀಗೆ ಮಾಡುವಾಗಲೂ ಗಂಡಾಂತರಗಳನ್ನು ಎದುರಿಸ ಬೇಕಾಯಿತು. ಏಕೆಂದರೆ ಆಗ್ರಾ ಮೊದಲು ಅವಧೀ (ಅಯೋಧ್ಯಾ) ರಾಜ್ಯದ ಸಾಮಂತನಾದ ಬಯಾನದ ಅಮೀರನಿಗೆ ಸಂಬಂಧಿಸಿತ್ತು. ಬಯಾನದ ಅಮೀರ ಸುಲ್ತಾನ್‍ಷರಫ್ ತನ್ನ ಸಂಸ್ಥಾನವನ್ನು ಜಲೇಸರ್ ಛಂದ್ವಾರ್, ಮರೇಡ್ರಾ ಹಾಗೂ ಸಾಕೇತ್ ವಿಭಾಗಕ್ಕೆ ಬದಲಿಸಿಕೊಳ್ಳಲು, ಆಗ್ರಾವನ್ನು ಸಿಕಂದರನಿಗೆ ಕೊಡಲು ಒಪ್ಪಿದ್ದ. ನವನಗರ ನಿರ್ಮಾಣವಾದ ಮೇಲೆ ಸುಲ್ತಾನ್‍ಷರಫ್ ಒಪ್ಪಿಗೆಯನ್ನು ಮುರಿದು ವಿರೋಧಿಸಿ ನಿಂತ. ಆಗ ಸಿಕಂದರ್ ಅವನನ್ನೂ ಅವನ ಸಾಮಂತ ಹಯಬತ್‍ಖಾನ್ ಜಿಲ್ವಾನೀ ಇಬ್ಬರನ್ನೂ ಆಗ್ರಾದಿಂದ ಹೊರಕ್ಕೆ ಹಾಕಿ ಆಗ್ರಾವನ್ನು ತನ್ನ ರಾಜಧಾನಿಯಾಗಿ ಭದ್ರಪಡಿಸಿದ.

ಸಿಕಂದರ್ ತನ್ನ ತಂದೆಯ ಕಾಲಕ್ಕಿಂತ ಆಡಳಿತವನ್ನು ಇನಿತು ಚೆನ್ನಾಗಿ ಸುಧಾರಿಸಿದ. ಆಫ್ಘನ್ ರಾಜರುಗಳಿಗೆ-ಸಾಮಂತರಿಗೆ-ವಿಶ್ವಾಸ ಹಾಗೂ ಮೇಲಧಿಕಾರಸ್ಥಾನದ ಗೌರವಘನತೆಗಳ ಬಗೆಗೂ ಬಾಗಿ ನಡೆಯುವುದರ ಬಗೆಗೂ ಅಧಿಕಾರವನ್ನು ಕೇಂದ್ರೀಕರಿಸಿ ಒಂದು ಬಗೆಯ ಕಲಿಕೆಗೊಳಪಡಿಸಿದ. ದಾಯಾದಿಗಳಲ್ಲಿ ಹಂಚಿಹೋಗಿದ್ದ ರಾಜ್ಯವನ್ನು ಜೌನ್‍ಪುರ ಗೆಲ್ಲುವುದರ ಮೂಲಕ ಒಂದುಗೂಡಿಸಿದ, ಪುನರೈಕ್ಯನ್ನು ಸಾಧಿಸಿದ. ಸಾಮಂತರು ಆಯವ್ಯಯ ಪಟ್ಟಿ ಸಲ್ಲಿಸುವಂತೆ ಆಜ್ಞೆ ಜಾರಿ ಮಾಡಿದ. ಹೀಗೆ ಮಾಡುವಲ್ಲಿ ಯಾರೊಂದಿಗೂ ಮುಖಾಮುಖಿ ಜಗಳಕ್ಕೆ ಎಡೆಕೊಡಲಿಲ್ಲ. ಹಿರಿಯ ಜನರನ್ನು ಆದರಿಸಿ ಕಿರಿಯ ಅಧಿಕಾರಿಗಳನ್ನು ಪ್ರೀತಿಸಿದ. ರಾಜ್ಯದ ಒಳಹೊರ ರಾಜಕೀಯ ಚಟುವಟಿಕೆಗಳನ್ನು ತಿಳಿಸುವುದಕ್ಕೆ ಒಂದು ಇಲಾಖೆಯನ್ನೇ ತೆರೆದು ಗುಪ್ತವಾರ್ತಾಮಾಹಿತಿಯ ಪದ್ಧತಿಯಲ್ಲಿ ಸುಸಂಬಂದ್ಧತೆಯನ್ನು ತಂದ. ಪ್ರತಿನಿತ್ಯ, ರಾಜನಿಗೆ ಸಮಾಚಾರವನ್ನು ತಿಳಿಸುವ, ಅಂದಂದಿನ ಧಾರಣೆÂಗಳ ಏರಿಳಿತ ತಿಳಿಸುವ ಮತ್ತು ಅಧಿಕಾರಿಗಳ ಚಲನವಲನಗಳನ್ನು ತಿಳಿಸುವ ಸಭೆಗಳು ಆಗುತ್ತಿದ್ದವು. ಏನಾದರೂ ತಪ್ಪು ಮಾರ್ಗದಲ್ಲಿ ಹೋಗುತ್ತಿದ್ದರೆ ರಾಜ ಕೂಡಲೆ ಕಾರ್ಯ ಪ್ರವೃತ್ತನಾಗಿ ಅದನ್ನು ಸರಿ ಪಡಿಸುತ್ತಿದ್ದ. ಆತ ನ್ಯಾಯ ಪದ್ಧತಿಯಲ್ಲಿ ಯಾವುದೇ ತರತಮವನ್ನು ಮಾಡಲಿಲ್ಲ, ಸ್ಥಾನ ಮಾನಗಳಿಗೆ ಲಕ್ಷಗೊಟ್ಟು ಪಕ್ಷಪಾತ ಮಾಡಲಿಲ್ಲ. ನ್ಯಾಯನಿರ್ಣಯಕ್ಕಾಗಿ ರಾಜ ವಿಶೇಷ ಅಧಿಕಾರಿಗಳನ್ನು ನೇಮಿಸಿದ್ದ ನ್ಯಾಯ ಮಾರ್ಗ ತಪ್ಪಬಾರದೆಂದು ತಾನೇ ಆಗೀಗ ಆ ಸಭೆಗಳಲ್ಲಿ ಪಾಲುಗೊಳ್ಳುತ್ತಿದ್ದ. ಸಿಕಂದರನ ಆಳಿಕೆಯ ಕಾಲ ಶಾಂತಿ ಹಾಗೂ ಅಭಿವೃದ್ಧಿಯ ಯುಗ ಎನ್ನಿಸಿತ್ತು, ಮಳೆ ಬೆಳೆಗಳಿಂದಲೂ ಸಮೃದ್ಧಿಯಿಂದ ಕೂಡಿತ್ತು. ಸಾಹಿತ್ಯ, ಸಂಗೀತ, ಕಲೆ, ಶಾಸ್ತ್ರವನೆಲ್ಲ ಪುನರುಜ್ಜೀವನ ಪಡೆದವು. ಸಂಸ್ಕøತ ಕೃತಿಗಳು ಪರ್ಷಿಯನ್ ಭಾಷೆಗೆ ಅನುವಾದ ಗೊಂಡವು. ಸುಲ್ತಾನ ಸ್ವತಃ ಕವಿಯಾಗಿದ್ದುದಲ್ಲದೆ ಅನೇಕ ಕವಿಗಳಿಗೆ ಆಶ್ರಯವನ್ನಿತ್ತು ಬೆಳೆಸಿದ. ದೂರದೂರದಿಂದ ವಿದ್ವಾಂಸರು ಆಶ್ರಯ ಬಯಸಿ ಅವನ ಆಸ್ಥಾನಕ್ಕೆ ಬಂದರು. ಹಿಂದು ಮುಸಲ್ಮಾನರಲ್ಲಿ ಹೊಂದಾಣಿಕೆಗೆ, ಮಧುರ ಬಾಂಧವ್ಯಕ್ಕೆ ಜೀವ ಬಂತು. ‘ಮದನ್-ಆಷ್-ಷಿಫಾ-ಯಿ-ಸಿಕಂದರ್’ ಹಾಗೂ ‘ಲಹಜಾತ್-ಇ-ಸಿಕಂದರ್‍ಷಾಹಿ’ ಪ್ರಸಿದ್ಧ ಕೃತಿಗಳಾಗಿವೆ. ‘ಗುಲ್‍ರುಖ್’ ಎಂಬ ಕಾವ್ಯನಾಮದಿಂದ ಕಾವ್ಯ ಬರೆಯುತ್ತಿದ್ದ ಆತ ಕ್ರಿ.ಶ. 1517 ನವೆಂಬರ್ 21ರಂದು ನಿಧನ ಹೊಂದಿದ.

ಇಬ್ರಾಹೀಮ್ ಲೋದಿ (1517-26): ತಂದೆಯ ಮರಣಾನಂತರ ಯಾವುದೇ ಆತಂಕಗಳನ್ನು ಎದುರಿಸದೆ ಇಬ್ರಾಹೀಮ್ ಪಟ್ಟ ಅಲಂಕರಿಸಿದ. ಆರಂಭದಲ್ಲಿ ಇಬ್ರಾಹೀಮ್ ತಾನೂ ತನ್ನ ತಮ್ಮ ಜಲಾಲ್‍ಖಾನ್ ಇಬ್ಬರೂ ಆಡಳಿತವನ್ನು ನಡೆಸುವುದಾಗಿ ಘೋಷಿಸಿ ಸೋದರನನ್ನು ಜೌನ್‍ಪುರದ ಸಿಂಹಾಸನದಲ್ಲಿ ಕೂಡಿಸಿದ. ಅವನು ಅಲ್ಲಿ ಭದ್ರವಾಗುವ ಮೊದಲೇ ಕೆಲ ಜಾಣ ಅಮೀನರ ಸಲಹೆಯ ಮೇರೆಗೆ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ಸೋದರನಲ್ಲಿ ಕೆಲವು ಜನ ಅಧಿಕಾರಿಗಳ-ಶ್ರೀಮಂತ ನವಾಬರ-ಆಯೋಗ ಕಳಿಸಿ ತನ್ನ ಸಾರ್ವಭೌಮತ್ವ ತಿಳಿಸಲು-ಒಪ್ಪಿಸಲು-ಸೂಚಿಸಿದ; ಜಲಾಲ್ ಅದಕ್ಕೆ ಒಪ್ಪಲಿಲ್ಲ. ರಾಜನ ಆಡಳಿತ ವಿಧಾನಕ್ಕೆ ಹೆದರಿದ ಜಲಾಲ್ ಜೌನ್‍ಪುರ ಬಿಟ್ಟು ತನ್ನ ಮೊದಲ ಮಂಡಲ ಕಾಲ್ವಿಗೆ ಹೋದನು. ಅನಂತರ ಆಜಮ್ ಹುಮಾಯೂನ್ ಸರ್ವಾನೀ ಎಂಬ ಅಮೀರನ ಸಹಾಯದಿಂದ ಅವಧ್ ಪ್ರಾಂತವನ್ನು ಗೆದ್ದ. ಇದನ್ನು ಕಂಡು ಇಬ್ರಾಹೀಮ್ ಆಜಮ್ ಹಮಾಯೂನನ್ನು ತನ್ನ ಕಡೆಗೆ ಒಲಿಸಿಕೊಂಡ. ಆಗ ಜಲಾಲ್ ಕಾಲ್ವಿ ಹಾಗೂ ಅವಧ್ ಏನೆಲ್ಲವನ್ನೂ ಬಿಟ್ಟು ರಾಜಧಾನಿ ಆಗ್ರಾಕ್ಕೆ ಹೋದ. ಅಲ್ಲಿ ಇಬ್ರಾಹೀಮನ ಸೇನಾಪತಿ ಮಲೀಕ್ ಆದಮ್ ಅವನಿಗೆ ಕೇವಲ ಕಾಲ್ವಿ ಸಂಸ್ಥಾನದಿಂದ ಸಂತುಷ್ಟನಾಗುವಂತೆ ಒಪ್ಪಿಸಿದ. ಆದರೆ ದಂಡೆತ್ತಿಹೋದ ಇಬ್ರಾಹೀಮ್ ಹಿಂದಿರುಗಿದಕೂಡಲೇ ಈ ಏರ್ಪಾಡನ್ನು ಒಪ್ಪಲಿಲ್ಲ. ಜಲಾಲ್ ಗ್ವಾಲಿಯರಕ್ಕೆ ಓಡಿಹೋದ, ಅಲ್ಲಿನಿಲ್ಲದೆ ಮುಂದಕ್ಕೆ ಮಾಲವಾಕ್ಕೆ ಹೋದ. ಆದರೆ ಅಲ್ಲಿ ಅವನಿಗೆ ತಿರಸ್ಕಾರ ಕಾಯ್ದಿತ್ತು. ಅಂತೆಯೇ ಅಲ್ಲಿಯೂ ನಿಲ್ಲದೆ ಗೊಂಡರ ಅರಣ್ಯಕ್ಕೆ ಓಡಿಹೋದ.  ಆ ಗೊಂಡರು ಅವನನ್ನು ಹಿಡಿದು ರಾಜನಿಗೆ ಒಪ್ಪಿಸಿದರು. ಅವನನ್ನು ಇತರ ಸೋದರರನ್ನು ಇಬ್ರಾಹೀಮ್ ಬಂದಿಯಾಗಿಸಿಟ್ಟು ಹಾನ್ಸೀಸ್ಥಳಕ್ಕೆ ಕಳಿಸಿದ. ಆದರೆ ಅವನು ಆ ಸ್ಥಳ ಮುಟ್ಟುವ ದಾರಿಯಲ್ಲೇ ಕೊಲ್ಲಲ್ಪಟ್ಟ.

ಜಲಾಲ್ ಸ್ವಲ್ಪ ಕಾಲ ಆಶ್ರಯಪಡೆದಿದ್ದ ಗ್ವಾಲಿಯರ್ ಸಂಸ್ಥಾನ ಇಬ್ರಾಹೀಮನ ದೃಷ್ಟಿಗೆ ಬಿದ್ದಿತು, ಅದನ್ನು ಗೆಲ್ಲುವುದಕ್ಕೆ ಅದೊಂದು ನೆಪವಾಯಿತು. ಗ್ವಾಲಿಯರ್ ಗೆಲ್ಲಬೇಕೆಂಬ ಸಿಕಂದರನ ಆಸೆ ಅವನ ಮಗನ ಮುಖಾಂತರ ಈಡೇರಿತು. ಅದೇ ಸಂದರ್ಭದಲ್ಲಿ ಅವನಿಗೆ ಮೇವಾರದ ರಾಣಾಸಿಂಗನನ್ನು ಗೆಲ್ಲಲು ಆಗಲಿಲ್ಲ, ದಂಡೆತ್ತಿಹೋದ ಸೇನೆ ಸೋತು ಹಿಂದಿರುಗಿತು.

ಜಲಾಲ್‍ಖಾನನ ಪ್ರತಿಭಟನೆ ಇಬ್ರಾಹೀಮನ ಮೇಲೆ ವಿಶೇಷ ಪರಿಣಾಮ ಬೀರಿತು. ಅವನು ತನ್ನ ತಂದೆಯ ದೊಡ್ಡಮನಸ್ಸನ್ನು ಮರೆತು ಆಸ್ಥಾನದ ಎಲ್ಲರನ್ನೂ ಸಂಶಯದಿಂದ ನೋಡ ತೊಡಗಿದ. ತನ್ನಲ್ಲೂ ಅವರಲ್ಲೂ ವಿಶೇಷವಾಗಿ ಶ್ರೀಮಂತ ನವಾಬರಲ್ಲಿ ಜಾತಿ ಐಕ್ಯ ಸಂಬಂಧ ಮರೆತು ಆಳುವ, ಆಳಿಸಿಕೊಳ್ಳುವ-ಅರಸ ಹಾಗೂ ಸೇವಕರ-ಅಂತರ ನಿರ್ಮಿಸಿಕೊಂಡ. ತನ್ಮೂಲಕ ಒಂದು ಬಗೆಯ ಅಸಂತೃಪ್ತತೆಯ ವಾತಾವರಣ ಸೃಷ್ಟಿಯಾಯಿತು. ತುರ್ಕೀಯರ ಹಾಗೂ ಆಫ್ಘನರ ಅಧಿಪತ್ಯದ ಜ್ವಾಲೆಯೂ ಒಳಗೊಳಗೆ ಅರಳತೊಡಗಿತು. ಜಲಾಲ್ ಖಾನನನ್ನು ಸೋಲಿಸುವಲ್ಲಿ ಸಹಾಯಮಾಡಿದ ಅನಂತರ ಇವನ ಕಡೆಗೆ ಒಲಿದ ಆಜಮ್‍ಹುಮಾಯೂನ್ ಸರ್ವಾನಿ ಮತ್ತು ತಂದೆ ಸಿಕಂದರ್‍ಷಾನ ಕಾಲದಿಂದಲೂ ಮಂತ್ರಿಯಾಗಿದ್ದ ಮಿಯಾನ್ ಭುವನನ್ನು ಜೈಲಿನಲ್ಲಿಟ್ಟ. ಅವನ ಸ್ವೇಚ್ಛಾಚಾರ, ದಬ್ಬಾಳಿಕೆಗಳು ಪ್ರತಿಭಟನೆಗೆ ಕಾರಣವಾದುವು. ಇದನ್ನು ಆಜಮ್‍ಹುಮಾಯೂನ್ ಸರ್ವಾನಿಯ ಪುತ್ರ ಇಸ್ಲಾಮ್‍ಖಾನ್ ಪ್ರತಿಭಟಿಸಿ ನಿಂತ. ಇಬ್ಬರು ಲೋದಿ ರಾಜರು, ಇಬ್ರಾಹೀಮನ ಚಿಕ್ಕಪ್ಪ ಹಾಗೂ ಒಬ್ಬ ಸೋದರ ಬೆಂಬಲಿಸಿ ನಿಂತರು. ಕೆಲವರು ಮಧ್ಯಸ್ಥಿಕೆ ವಹಿಸಿ ರಾಜನಿಗೆ ಒಪ್ಪಂದ ಮಾಡಿಕೊಳ್ಳಲು ಹೇಳಿದರು. ಆದರೆ ರಾಜ ಯಾವುದಕ್ಕೂ ಒಪ್ಪದೆ ಪ್ರತಿಭಟನಾಕಾರರನ್ನು ದೇಶದ್ರೋಹಿಗಳೆಂದು ಘೋಷಿಸಿ ತನ್ನ ಅಧೀನ ಅಧಿಕಾರಿಗಳಾದ-ರಾಜ್ಯಪಾಲರಾದ ದರ್ಯಾಖಾನ್ ಲೋಹಾನಿ(ಬಿಡಾರ್) ನಾಶಿರಖಾನ್ ಲೋಹಾನಿ (ಘಜಿಪುರ) ಮತ್ತು ಷೇಕ್‍ಮಹಮ್ಮೂದ್ ಥರ್ಮೂಲಿ ಇವರಿಗೆ ಯುದ್ಧಮಾಡಲು ಆಜ್ಞಾಪಿಸಿದ. ಘನಘೋರ ಯುದ್ಧ ನಡೆದು ರಕ್ತದ ಕಾಲುವೆ ಹರಿಯಿತು. 10,000 ಆಫ್ಘನ್ ಯೋದರು ಮಡಿದರೆಂದು ಒಂದು ವರದಿ ಹೇಳುತ್ತದೆ. ಯುದ್ಧದಲ್ಲಿ ಪ್ರತಿಭಟನಾಕಾರರು ಸೋತು ಇಸ್ಲಾಮ್‍ಖಾನ್ ಕೊಲ್ಲಲ್ಪಟ್ಟ.

ಪ್ರತಿಭಟನೆಯ ಪರಿಣಾಮವನ್ನು ಲೆಕ್ಕಿಸದೆ ಗೆಲುವಿನ ಮತ್ತಿನಲ್ಲಿ ಇಬ್ರಾಹೀಮ್ ಇನ್ನಷ್ಟು ನಿಷ್ಕರುಣಾದೃಷ್ಟಿಯಿಂದ ನಡೆದುಕೊಂಡ, ಮಿಯಾನ್ ಭುವನನ್ನು ಕೊಲ್ಲಿಸಿದ. ಕೈದಿಯಾಗಿದ್ದ ಆಜಮ್‍ಹುಮಾಯೂನ್ ಬಂದೀಖಾನೆಯಲ್ಲಿ ಮರಣವನ್ನಪ್ಪುವಂತೆ ನೋಡಿಕೊಂಡ. ಇನ್ನೊಬ್ಬ ಅಜ್ಜ ಮಿಯಾನ್‍ಹುಸೈನ್ ಫರ್ಮೂಲೀ ಎಂಬವನನ್ನು ಚಂದೇರಿಯಲ್ಲಿ ಕೊಲ್ಲಿಸಿದ. ಈ ಕಾರ್ಯಗಳು ಅವನ ಅಧಿಕಾರಿಗಳಲ್ಲಿ-ಶ್ರೀಮಂತ ಪ್ರಜೆಗಳಲ್ಲಿ ರೋಷಹುಟ್ಟಿಸಿತು. ರಾಜ್ಯದ ಪೂರ್ವಭಾಗದಲ್ಲಿ ಇದ್ದ ಕೆಲ ಮುಖ್ಯ ಲೋದಿ ಹಾಗೂ ಫರ್ಮೂಲಿ ಅಮೀರರಲ್ಲಿ ಎಚ್ಚರಿಕೆಯುಂಟಾಗಿ ಅವರು ತಮ್ಮಷ್ಟಕ್ಕೆ ರಕ್ಷಣೆಗಾಗಿ ಹೊಂದಿಕೊಳ್ಳುವಂತೆ ಮಾಡಿದವು. ಅವರು ತಮ್ಮಷ್ಟಕ್ಕೆ ಸಂಘಟಿತರಾದರು. ಇಬ್ರಾಹೀಮ್ ಅನತಿಕಾಲದಲ್ಲೇ ಅಧಿಕಾರದಿಂದ ಇಳಿಸಬೇಕೆಂದಿದ್ದ ದರ್ಯಾಖಾನ್ ಲೋಹಾನಿ ನಿಷ್ಠೆ ತೊಡೆದು ಹಾಕಿದ; ಅನಿರೀಕ್ಷಿತ ಸಾವಿಗೆ ತುತ್ತಾಗಲು ಅವನ ಪುತ್ರ ಬಹಾರ್‍ಖಾನ್ ನೇತೃತ್ವ ವಹಿಸಿ ಹಲವು ಅಮೀರರ ಸಹಾಯದಿಂದ ‘ಸುಲ್ತಾನ್‍ಮಹಮ್ಮದ್’ ಎಂಬ ಹೆಸರು ಧರಿಸಿ ಸ್ವಾತಂತ್ರ್ಯ ಘೋಷಿಸಿದ. ಅವನು ಬಿಹಾರದಿಂದ ರಾಜಸ್ಥಾನದ ಸಂಭಲದವರೆಗಿನ ಭೂಭಾಗವನ್ನು ಆಕ್ರಮಿಸಿಕೊಂಡ. ಅವನು ಸುಮಾರು ಎರಡು ವರ್ಷ ತನ್ನ ಹೆಸರಿನಲ್ಲಿ ‘ಖುತ್ಪಾ’ ಓದಿಸಿದ. ಅವನಂತೆಯೆ ಘಾಜಿಪುರದ ನಾಶಿರ್‍ಖಾನ್ ಲೋಹಾನಿ, ಆಜಮ್‍ಹುಮಾಯೂನ್ ಸರ್ವಾನಿಯ ಇನ್ನೊಬ್ಬ ಮಗ ಫತೇಖಾನ್ ಮತ್ತು ಷೇರ್‍ಖಾನ್‍ಸೂರ್ (ತರುವಾಯದಲ್ಲಿ ಸುಲ್ತಾನ್ ಷೇರ್‍ಷಾ) ಸ್ವಾತಂತ್ರ್ಯವನ್ನು ಘೋಷಿಸಿದರು.
ಇಬ್ರಾಹೀಮ್ ಲೋದಿಯ ಸೇನೆ ರಾಜ್ಯದ ಪೂರ್ವ ಪ್ರಾಂತಗಳಲ್ಲಿ ಯುದ್ಧಮಾಡುತ್ತಿರಲು ಪಂಜಾಬ್ ಪ್ರಾಂತದ ಒಡೆಯ ದೌಲತ್‍ಖಾನ್ ಲೋದಿ ಬಾಬರ್‍ನೊಂದಿಗೆ ಸಂಧಾನ, ಸಮಾಲೋಚನೆಗಳನ್ನು ಆರಂಭಿಸಿದ. ಇಬ್ರಾಹೀಮ ಕಳಿಸಿದ ಕರೆಯ ಆಜ್ಞೆಗಳನ್ನು ಉಲ್ಲಂಘಿಸಿ ಮತ್ತೆ ರಾಜನನ್ನು ಭೇಟಿಯಾಗಲು ಹೋದ ಅವನ ಪುತ್ರ ಬಂಧನ ಭಯದಿಂದ ಲಾಹೋರಕ್ಕೆ ಹಿಂತಿರುಗಿ ಓಡಿಬಂದ. ಆಘಾತವನ್ನುಂಟು ಮಾಡುವ ಇಬ್ರಾಹೀಮನ ಹಿಂಸೆಗಳನ್ನು ಮಗನಿಂದ ಕೇಳಿದ ಅವನು ಇಬ್ರಾಹೀಮನೊಂದಿಗೆ ನಿಷ್ಠೆಯಿಂದ ಇರಲು ಸಾಧ್ಯವಿಲ್ಲವೆಂದು ಬಗೆದು, ಬಿಹಾರ ಮುಂತಾದ ಪ್ರಾಂತಾಧಿಪತಿಗಳ ಹಾಗೆ ಪ್ರತಿಭಟಿಸಲು ತಾಖತ್ತು ಇಲ್ಲವೆಂದು ಅರಿತುಕೊಂಡು ಬಾಬರನಲ್ಲಿ ಸಹಾಯ ಯಾಚಿಸಿದ. ಆ ಕಾರ್ಯಕ್ಕಾಗಿ ತನ್ನ ಮಗನನ್ನು ಕಾಬುಲ್‍ಗೆ ಕಳಿಸಿದ. ಇವನು ಈ ಮೊದಲು ಇಬ್ರಾಹೀಮನ ಆಸ್ಥಾನಕ್ಕೆ ಹೋದ ದಿಲಾವರ್‍ಖಾನ್ ಲೋದಿ. ಬಾಬರನ ಜೊತೆ ಭೇಟಿ ಆದಮೇಲೆ ಅವನನ್ನು ಮುಂದೆ ಕೆಲಕಾಲದ ಮೇಲೆ ಬಾಬರ್ ಅವನಿಗೆ ಖಾನ್-ಇ-ಖಾನಾನ್ (ಮುಖ್ಯ ಸೇನಾಪತಿ ಸ್ಥಾನ) ಸ್ಥಾನವಿತ್ತು ಸನ್ಮಾನಿಸಿದ. ಅವನು ಹುಮಾಯೂನನ ಕಾಲದಲ್ಲಿಯೂ ಆಸ್ಥಾನದಲ್ಲಿ ಮುಂದುವರಿದು ಸೇವೆಸಲ್ಲಿಸಿದ. ಇವನು ಕಾಬುಲಿಗೆ ಹೋದಾಗ ಇಬ್ರಾಹೀಮನ ಚಿಕ್ಕಪ್ಪ ಸಮಯಕ್ಕಾಗಿ ಕಾಯುತ್ತಿದ್ದವನು ಗುಜರಾತದಿಂದ ಅಲ್ಲಿಗೆ ಬಂದಿದ್ದ. ಪಂಜಾಬ್ ಪ್ರಾಂತವನ್ನು ತನ್ನರಾಜ್ಯಕ್ಕೆ ಸೇರಿಸಿಕೊಳ್ಳಲು ಕಾತರ ಪಡುತ್ತಿದ್ದ ಬಾಬರ್ ಈ ದಾಯಾದಿಗಳ ಸಹಾಯ ಯಾಚನೆಗೆ ಕೂಡಲೆ ಒಪ್ಪಿಗೆಯನ್ನಿತ್ತು 1524ರಲ್ಲಿ ಲಾಹೋರಿನ ಮೇಲೆ ದಂಡೆತ್ತಿಬಂದ. ಅವನಿಗೂ ಇಬ್ರಾಹೀಮನ ಸೇನಾಪತಿ ಬಹಾರ್‍ಖಾನ್ ಲೋದಿಗೂ ಯುದ್ಧವಾಯಿತು. ಇಬ್ರಾಹೀಮನ ಸೇನೆ ಸೋತಿತು. ಗೆದ್ದ ಬಾಬರನನ್ನು ದೌಲತ್‍ಖಾನ್ ಲೋದಿ ಮುಲ್ತಾನದ ಕಡೆಗೆ ಓಡಿಹೋದವನು ದೀಪಾಲ್‍ಪುರದಲ್ಲಿ ಬಂದು ಭೇಟಿಯಾದನು. ಬಾಬರ್ ದೌಲತ್‍ಖಾನನಿಗೆ ರಾಜ್ಯವನ್ನು ಪುನಃ ಕೊಡದೆ ಅಲ್ಲಿನ ಆಡಳಿತ ನೋಡಿಕೊಳ್ಳಲು ತನ್ನ ಅಧಿಕಾರಿಗಳನ್ನು ನೇಮಿಸಿದ. ಇದನ್ನು ಕಂಡ ದೌಲತ್‍ಖಾನ್ ಬಾಬರನ ಮೇಲೆ ಮುನಿಸುಗೊಂಡು ತನ್ನ ದಾಯಾದಿಯಾದ ಆಲಮ್‍ಖಾನನೊಂದಿಗೆ ಸೇರಿ ಸಂಚುಮಾಡಿದ. ಇಬ್ಬರೂ ಸೇರಿ ದಿಲ್ಲಿಯ ಮೇಲೆ ದಾಳಿಮಾಡಿದರು. ಈ ಸಂಚಿನ ಪ್ರಕಾರ ಬಾಬರನಿಗೆ ಪಂಜಾಬ್ ಪ್ರಾಂತವನ್ನು ಬಿಟ್ಟುಕೊಡ ಬೇಕಾಗಿತ್ತು. ಆಲಮ್‍ಖಾನ್ ದೌಲತ್‍ಖಾನನಿಗಿಂತ ಹೆಚ್ಚುಶಕ್ತಿಶಾಲಿಯಾದ; 1525ರಲ್ಲಿ ಇಬ್ರಾಹೀಮ್ ಲೋದಿಯ ಮೇಲೆ ದಾಳಿ ಮಾಡಿ ದಿಲ್ಲಿ ಆಕ್ರಮಿಸಿದ; ಆದರೆ ಸಹಜವಾಗಿ, ಸರಳ ರೀತಿಯಲ್ಲೇ ಇಬ್ರಾಹೀಮನಿಗೆ ಸೋತ. ಈ ಮಧ್ಯೆ ಈ ಎಲ್ಲ ಚಟುವಟಿಕೆಗಳನ್ನು ಗಮನಿಸುತ್ತಿದ್ದ ಬಾಬರ್, ಆಲಮ್‍ಖಾನ ಅಥವಾ ದೌಲತ್‍ಖಾನ ನಂಬಿಗೆಗೆ ಯೋಗ್ಯರಲ್ಲ ವೆಂದೂ ಯುದ್ಧಗಳಲ್ಲಿ ಅವರ ಮೇಲೆ ಭರವಸೆ ಇಡುವಂತಿಲ್ಲವೆಂದೂ ಬಗೆದು ಸ್ವತಃ ದಾಳಿಮಾಡಲು ಹೊರಟ. ಮೊದಲು ಪಂಜಾಬ್ ಪ್ರಾಂತವನ್ನು ಗೆದ್ದು, ಆಫ್ಘನ್ ವೈರಿಗಳನ್ನು ಸದೆಬಡಿದು ದಿಲ್ಲಿಯತ್ತ ದಂಡಯಾತ್ರೆ ಬೆಳೆಸಿದ. ದಿಲ್ಲಿಯಿಂದ ಇಬ್ರಾಹೀಮನೂ ತನ್ನ ಸೇನೆಯೊಂದಿಗೆ ಮೊಗಲರನ್ನು ಎದುರಿಸಲು ಮುಂದೆ ನಡೆದ. ಈ ಎರಡೂ ಸೇನೆಗಳು 1526 ಏಪ್ರಿಲ್ 20ರಂದು ಪಾಣಿಪತ್ ಮೈದಾನದಲ್ಲಿ ಸಂಧಿಸಿದವು. ಎರಡರ ಮಧ್ಯೆ ಘೋರಯುದ್ಧವಾಯಿತು. ಆ ಯುದ್ಧದಲ್ಲಿ ಇಬ್ರಾಹೀಮನ ಸೇನೆಯನ್ನು ಸೋಲಿಸಿ ಅವನನ್ನು ಕೊಲ್ಲಲಾಯಿತು. ದಿಲ್ಲಿಯ ಮೇಲೆ ಮೊಗಲರ ಅಧಿಪತ್ಯಕ್ಕೆ ನಾಂದಿಯಾಯಿತು.

(ನೋಡಿ- ಬಾಬರ್)

(ನೋಡಿ- ಮೊಗಲರು)  
                             
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ